55 ವರ್ಷಗಳ ಹಿಂದೆ ಉದಾತ್ತ ಆದರ್ಶಗಳನ್ನು ಇಟ್ಟುಕೊಂಡು ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಬಲ್ಲ ಹಾಗೂ ಅಗತ್ಯವಾಗಿದ್ದ ನಮ್ಮ ಒಟ್ಟು ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ಯೋಗ್ಯವಾದ ಮೌಲ್ಯಾಧಾರಿತ, ವಿದ್ಯಾಭ್ಯಾಸ, ಪೋಷಣೆ, ಆರೋಗ್ಯ ನೀಡಿ ಅವರನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸಲು ಹಾಗೂ ನೆರವು ನೀಡಲು ಹುಟ್ಟಿಕೊಂಡ ಶ್ರೀ ರಾಮಕೃಷ್ಣ ಸೇವಾ ಸಮಾಜ’ ಮುಂದೆ ನಡೆದು ಬಂದಂತಹ ದಾರಿ ಸುಲಭದ್ದಾಗಿರಲಿಲ್ಲ. ಇದರ ಹಿಂದೆ ನೂರಾರು ಮಂದಿ ಸೇವಾ ಮನೋಭಾವದ ಹಿರಿಯರ ಶ್ರದ್ಧೆ, ನಿಷ್ಠೆ, ತ್ಯಾಗ ಮನೋಭಾವ ಇಲ್ಲಿ ತುಂಬಾ ಕೆಲಸ ಮಾಡಿದೆ. ಈ ಸಂಸ್ಥೆ ಸ್ಥಾಪಿಸಲು ಪ್ರಥಮದಲ್ಲಿ ತೊಡಗಿಸಿಕೊಂಡವರು ನಮ್ಮ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿ| ಎಂ. ಸದಾಶಿವ ರಾವ್ ಹಾಗೂ ದಿ| ಬಿ.ಎಲ್.ರಾವ್ ಇವರ ಕನಸಿನ ಕೂಸು ನಮ್ಮ ಈ ಸಮಾಜ ಆಗಿರುತ್ತದೆ. ನಂತರ ಇವರೊಂದಿಗೆ ಕೈಜೋಡಿಸಿ ದುಡಿದವರಲ್ಲಿ ಈಗ ನಮ್ಮೊಂದಿಗೆ ಇಲ್ಲದ ದಿ|ಪಿ. ವಿಠ್ಠಲ್ ಪೈ ಮತ್ತು ದಿ| ಎಂ. ಮಾಧವ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತಿದ್ದೇವೆ.
ಕಾರ್ಮಿಕರ ಮಕ್ಕಳ ಸಂಕಟ ನೋಡಿ ಹುಟ್ಟಿತು :
1953ರಲ್ಲಿ ಪುತ್ತೂರಿನ ಕೋರ್ಟಿನಲ್ಲಿ ಬೆಂಚ್ ಕ್ಲಕ್ ಆಗಿದ್ದ ಬಿ.ಎಲ್. ರಾಯರು ಕಚೇರಿಗೆ ಹೋಗುವ ದಾರಿಯಲ್ಲಿ ರಸ್ತೆಗೆ ಡಾಮರು ಹಾಕುವ ಕಾರ್ಮಿಕರ ಇಬ್ಬರು ಮಕ್ಕಳು ಜಲ್ಲಿ ಮೇಲೆ ಮಲಗಿರುವುದನ್ನು ಕಂಡು ಮರುಗಿದರು. ಕೊಯಮುತ್ತೂರು ಮೂಲದ ದಂಪತಿಯ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಸಲಹಿದ ಬಿ.ಎಲ್. ರಾಯರೇ ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕರು. ಆಗಿನ ಹಿರಿಯ ನ್ಯಾಯವಾದಿ ಎಂ. ಸದಾಶಿವ ರಾಯರು ಬಿ.ಎಲ್. ರಾಯರ ಜೊತೆ ಸೇರಿ ಸಮಾಜಕ್ಕೆ ವಿಶಿಷ್ಟ ರೂಪು ನೀಡಿದರು. ಸದಾಶಿವ ರಾಯರು ಸ್ಥಾಪಕಾಧ್ಯಕ್ಷರಾಗಿ ಮತ್ತಷ್ಟು ಅನಾಥ ಮಕ್ಕಳನ್ನು ಸಾಕಿದರು. ಇಬ್ಬರೂ ಸೇರಿ ಅಕ್ಕಿ, ತರಕಾರಿ, ಬೇಳೆಕಾಳುಗಳನ್ನು ದಾನಿಗಳಿಂದ ಸಂಗ್ರಹಿಸಿ ಮೊದಲ ಹಂತದಲ್ಲಿ ಒಂಬತ್ತು ಮಕ್ಕಳನ್ನು ಸಾಕಿದರೆ, ಸಂಸ್ಥೆಗೆ ತಾಯಿಯ ರೂಪದಲ್ಲಿ ಬಂದವರು ಮಂಜಕ್ಕೆ ಎಂಬವರು. 1957ರಲ್ಲಿ ಬಿ.ಎಲ್. ರಾಯರು ಆಶ್ರಮದ ಮಕ್ಕಳನ್ನು ಕೊಯ್ಲಕ್ಕೆ ಪಿಕ್ನಿಕ್‌ಗೆ ಕರೆದುಕೊಂಡು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟರು.