08251-230016 Main Road, Puttur, Karnataka

Institutions

ಸಮಾಜವು ಆರ್ಥಿಕವಾಗಿ ತೀರಾ ದುರ್ಬಲರು ಹಾಗೂ ತಂದೆ/ತಾಯಿ ಇಲ್ಲದ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ರಕ್ಷಣೆ, ವಿದ್ಯೆ, ಊಟ-ಉಪಚಾರ, ವಸತಿ, ಉಡುಗೆ-ತೊಡುಗೆ, ಔಷಧಿ ಇತ್ಯಾದಿಗಳನ್ನು ಉಚಿತವಾಗಿ ನೀಡಿ ಇಂತಹ ಮಕ್ಕಳನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವಂತೆ ಹಾಗೂ ಮುಂದಕ್ಕೆ ಯೋಗ್ಯ ಪ್ರಜೆಗಳಾಗಿ ಬೆಳೆಯಲು ಅನುಕೂಲವಾಗುವಂತೆ ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಈ ಸಮಾಜದಲ್ಲಿ ನೀಡುವ ಉದ್ದೇಶವನ್ನು ಇಟ್ಟುಕೊಂಡು ಇದರ ಜೊತೆಗೆ ಉದ್ಯೋಗಸ್ಥ ಮಹಿಳೆಯರಿಗೋಸ್ಕರ ಒಂದು ವಸತಿ ಗೃಹವನ್ನು ನಿರ್ಮಿಸಿ ಹಾಗೂ ನಮ್ಮ ಸಮಾಜದ ಇತರ ಪೂರಕ ಚಟುವಟಿಕೆಗಳನ್ನು ಕೈಗೊಂಡು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ಸಹಸಂಸ್ಥೆಗಳನ್ನು ನಾವು ನಡೆಸುತ್ತಾ ಬರುತ್ತಿದ್ದೇವೆ.
1. ಸ್ವಾಮಿ ವಿವೇಕಾನಂದ ಗ್ರಂಥಾಲಯ:
ನಮ್ಮ, ಸಮಾಜವು ಪ್ರಾರಂಭದಲ್ಲಿ 1953ರಲ್ಲಿ ಈ ಗ್ರಂಥಾಲಯವನ್ನು ಸ್ಥಾಪಿಸಿ ಮುಖ್ಯವಾಗಿ ಶ್ರೀ ರಾಮಕೃಷ್ಣ ಪರಮಹಂಸ, ಮಾ ಶಾರದಾಮಣಿ ಹಾಗೂ ಸ್ವಾಮಿ ವಿವೇಕಾನಂದ. ನಮ್ಮ ಧರ್ಮ, ಸಂಸ್ಕೃತಿ, ಚರಿತ್ರೆ, ಮಹಾಪುರುಷರ ಜೀವನಚರಿತ್ರೆ ಇವುಗಳನ್ನು ಒಳಗೊಂಡ ಪುಸ್ತಕಗಳನ್ನು ಸಂಗ್ರಹಿಸಿ ಆಸಕ್ತರಿಗೆ ಇದರ ಉಪಯೋಗವು ಸಿಗುವಂತೆ ಮಾಡಿದೆ. ಅನಂತರ ಆಗಿಂದಾಗ್ಗೆ ಈ ಪುಸ್ತಕ ಭಂಡಾರಕ್ಕೆ ಹೆಚ್ಚಿನ ಮೌಲ್ಯಯುತ ಪುಸ್ತಕಗಳು ಸೇರ್ಪಡೆಗೊಂಡು ಈ ದಿಸೆಯಲ್ಲಿ ನಮಗೆ ಉದಾರವಾಗಿ ಪುಸ್ತಕಗಳನ್ನು ನೀಡಿದ ಸಜ್ಜನರಿಗೆ ನಾವು ಕೃತಜ್ಞರಾಗಿದ್ದೇವೆ. ಈಗ ಸುಮಾರು 2500 ಪುಸ್ತಕಗಳು ನಮ್ಮ ಭಂಡಾರದಲ್ಲಿ ಇದೆ. ಇದರೊಂದಿಗೆ ವಿಜಯಕರ್ನಾಟಕ, ಪುಂಗವ, ಸುದ್ದಿ, ಮುಕ್ತವಾಣಿ, ಗೀತಾಮಿತ್ರ, ಮಾತೃವಾಣಿ, ವಿವೇಕ ಸಂಪದ, ವಿವೇಕಪ್ರಭ ಪತ್ರಿಕೆಗಳು ನಮ್ಮ ಗ್ರಂಥಾಲಯಕ್ಕೆ ಉಚಿತವಾಗಿ ದೊರೆಯುತ್ತಿದೆ. ಇವರೆಲ್ಲರಿಗೂ ಕೃತಜ್ಞತೆಗಳು.
2. ಮಾ ಶಾರದಾಮಣಿ ಅನಾಥಾಲಯ :
1954ರ ಮಾರ್ಚ್ 7ರಂದು ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನದಂದು ಆರಂಭವಾದ ಮಾತೆ ಶಾರದಾಮಣಿ ಅನಾಥಾಲಯ ಇದರಲ್ಲಿ 31-03-2009ಕ್ಕೆ ಅಂತ್ಯವಾಗುವ ವರ್ಷದಲ್ಲಿ 71 ಮಕ್ಕಳಿರುತ್ತಾರೆ. ಇವರಲ್ಲಿ 10  ಹುಡುಗರು ಮತ್ತು 61 ಹುಡುಗಿಯರು. ಈ ಪೈಕಿ 68 ಮಕ್ಕಳಿಗೆ ಸರಕಾರದ ವತಿಯಿಂದ ಜಿಲ್ಲಾ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯಿಂದ ಒಂದು ಮಗುವಿಗೆ ತಿಂಗಳೊಂದರ ರೂಪಾ 150/-ರಂತೆ (ವರ್ಷದಲ್ಲಿ 10 ತಿಂಗಳು ಮಾತ್ರ) ಅನುದಾನ ದೊರೆಯುತ್ತಿದೆ. ಉಳಿದ ಮಕ್ಕಳಿಗೆ ಸರಕಾರದ ಅನುದಾನವಿಲ್ಲ. ಈ ಅನಾಥಾಲಯವು ನಮ್ಮ ಮುಖ್ಯ ಕಟ್ಟಡದಲ್ಲೇ ಇದೆ.
3. ಮಂಜಕ್ಕ ನಿರ್ಗತಿಕ ಕುಠೀರ:
ಪ್ರಕೃತ 2 ಕುಠೀರಗಳು ಇವೆ. ಇದರಲ್ಲಿ ಒಟ್ಟು 50 ಮಂದಿ ಮಕ್ಕಳಿರುತ್ತಾರೆ. 17 ಮಂದಿ ಹುಡುಗರು ಮತ್ತು 33 ಮಂದಿ ಹುಡುಗಿಯರು ಇರುತ್ತಾರೆ. ಈ ಮಕ್ಕಳ ಪೋಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಒಂದು ಮಗುವಿಗೆ ತಿಂಗಳೊಂದರ ರೂ. 400/- ರಂತೆ (ವರ್ಷದಲ್ಲಿ 10 ತಿಂಗಳು ಮಾತ್ರ) ಅನುದಾನ ದೊರೆಯುತ್ತಿದೆ. ಈ ಕುಠೀರಗಳು ನಮ್ಮ ಸಮಾಜದ ಬಿ.ಎಲ್.ರಾವ್ ಸ್ಮಾರಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತದೆ.

4. ಕಸ್ತೂರ್ಬಾ ಉದ್ಯೋಗಸ್ಥ ಮಹಿಳೆಯರ ವಸತಿಗೃಹ:


ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದೊಂದಿಗೆ 1987ರಲ್ಲಿ ಪ್ರಾರಂಭವಾದ ಈ ವಸತಿಗೃಹದಲ್ಲಿ ಆರಂಭದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಮಾತ್ರ ಅವಕಾಶವಿತ್ತು. ಈಗ ವಿದ್ಯಾರ್ಥಿನಿಯರಿಗೂ ವಸತಿಗೃಹದಲ್ಲಿ ಅವಕಾಶ ನೀಡಲು ಸರಕಾರದ ಅನುಮತಿ ದೊರೆತಿರುತ್ತದೆ. ವರದಿ ವರ್ಷದಲ್ಲಿ 46 ಉದ್ಯೋಗಸ್ಥ ಮಹಿಳೆಯರು, 10 ವಿದ್ಯಾರ್ಥಿನಿಯರು ಈ ವಸತಿಗೃಹದ ಪ್ರಯೋಜನ ಪಡೆಯುತ್ತಿದ್ದಾರೆ. ಇದು ಪುತ್ತೂರಿನಲ್ಲಿ ಮಾನ್ಯತೆ ಪಡೆದ ಏಕೈಕ ಉದ್ಯೋಗಸ್ಥ ಮಹಿಳೆಯರ ವಸತಿಗೃಹ.

5. ನಿವೇದಿತಾ ಶಿಶುವಿಹಾರ (ಶಿಶುಪಾಲನಾ ಕೇಂದ್ರ)
ಈ ಸಂಸ್ಥೆಯಲ್ಲಿ ಪ್ರಕೃತ 28 ಮಕ್ಕಳಿರುತ್ತಾರೆ. ಇವರ ಪೈಕಿ 5 ಮಕ್ಕಳು ಇಲ್ಲಿಯೇ ಆಶ್ರಯ ಪಡೆಯುತ್ತಿದ್ದಾರೆ. ಈ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಬಾಲವಾಡಿ ತರಗತಿಗಳನ್ನು ನಡೆಸುವುದರ ಜೊತೆಗೆ ಅವರಿಗೆ ಪೋಷಕಾಂಶಯುತ ಆಹಾರ ನೀಡಲ್ಪಡುತ್ತದೆ. ಮಕ್ಕಳಿಗೆ ಬೇಕಾದ ಆಟದ ಆಟಿಕೆಗಳು ಹಾಗೂ ಬಾಲವಾಡಿ ನಡೆಸಲು ತರಬೇತಿ ಹೊಂದಿದ ಶಿಕ್ಷಕಿಯರು ಇರುತ್ತಾರೆ. ಈ ಶಿಶುಪಾಲನಾ ಕೇಂದ್ರಕ್ಕೆ ರಾಜ್ಯ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಒಟ್ಟು ರೂ.21,200 ವಾರ್ಷಿಕ ಧನಸಹಾಯ ದೊರೆಯುತ್ತದೆ.