ಮಕ್ಕಳ ದಿನಚರಿ
ಇಂದಿನ ಮಕ್ಕಳೇ ಮುಂದಿನ ಜನಾಂಗ. ಮಕ್ಕಳೇ ಭಾರತದ ಸಂಪತ್ತು. ಇಂತಹ ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಚಿಕ್ಕಂದಿನಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ರೂಪಿಸಬೇಕಾಗಿದೆ. ಉತ್ತಮ ಪ್ರಜೆಗಳಿಂದ ಮಾತ್ರ ಭಾರತ ಮಹಾನ್ ಭಾರತವಾಗಬಹುದು. ಮಕ್ಕಳ ಸಂಸ್ಕಾರ ತಾಯಿಯ ಗರ್ಭದಿಂದಲೇ ಆರಂಭವಾಗುವುದು. ಮುಂದೆ ಮನೆಯೇ ಪಾಠಶಾಲೆ. ಅಮ್ಮನೇ ಮೊದಲ ಗುರು. ನಡೆದಾಡಲು ಆರಂಭಿಸಿದಾಗ ನೆರೆಕರೆ, ನೋಡುವ, ಕಾಣುವ ದೃಶ್ಯಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಎಳವೆಯಲ್ಲಿಯೇ ವಿದ್ಯಾಭ್ಯಾಸ ಆರಂಭವಾಗುತ್ತದೆ. ಶಾಲೆಗಳಲ್ಲಿ ಸಹಪಾಠಿಗಳಿಂದ, ಶಿಕ್ಷಕ-ಶಿಕ್ಷಕಿಯರಿಂದ ಸಂಸ್ಕಾರ ರೂಪುಗೊಳ್ಳುತ್ತಾ ಹೋಗುತ್ತದೆ. ಆದರೆ ಬಡತನ, ಅವಿದ್ಯಾವಂತರಾದ ಹೆತ್ತವರು, ಪೋಷಕರು, ಹೆತ್ತವರ ಅಗಲಿಕೆ ಮಕ್ಕಳನ್ನು ಅನಾಥರನ್ನಾಗಿ ಮಾಡಿಬಿಡುತ್ತದೆ.
ಈ ಸೇವಾ ಸಮಾಜ ಅನಾಥಾಶ್ರಮವೆಂದು ಕರೆಯಲ್ಪಡುತ್ತಿದೆ. ಈ ಸೇವಾ ಸಮಾಜದಲ್ಲಿ ಮಕ್ಕಳ ಜೀವನ ಹೇಗಿರುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರಬಹುದು. ಮನೆಯಲ್ಲಿ ನಾಲ್ಕು ಮಕ್ಕಳನ್ನು ನೋಡಿಕೊಳ್ಳುವುದೇ ದುಸ್ತರವಾಗಿದೆ. ಇಷ್ಟೊಂದು ಮಕ್ಕಳನ್ನು ಒಂದೇ ಸೂರಿನಡಿಯಲ್ಲಿ ಹೇಗಪ್ಪಾ ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಜನರ ಮನದಲ್ಲಿ ಏಳಬಹುದು. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.
ಆಶ್ರಮದವರು ಶಾಲಾರಂಭಕ್ಕೆ ಮೊದಲೇ ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟಿರುತ್ತಾರೆ. ಮಕ್ಕಳನ್ನು ಆಶ್ರಮಕ್ಕೆ ಸೇರಿಸಲು ಬಯಸುವವರು ಬಂದು ನಿಗದಿತ ಅರ್ಜಿಪಾರಂಗಳನ್ನು ಒಯ್ಯುತ್ತಾರೆ. ಆಶ್ರಮದವರು ನಿಶ್ಚಯಿಸಿದ ದಿನದಂದು ಶಾಲಾ ಸರ್ಟಿಫಿಕೇಟುಗಳೊಂದಿಗೆ ಬರುತ್ತಾರೆ. ಆಶ್ರಮದ ಆಡಳಿತ ಮಂಡಳಿಯವರು ಒಬ್ಬೊಬ್ಬರನ್ನೇ ಕರೆದು ಮಕ್ಕಳ ಸ್ಥಿತಿಗತಿ ವಿಚಾರಿಸಿ ತಿಳಿದುಕೊಂಡು ಅರ್ಹ ಮಕ್ಕಳನ್ನು ಆರಿಸುತ್ತಾರೆ. ತಂದೆ ಇಲ್ಲದವರು, ತಾಯಿಯನ್ನು ಕಳಕೊಂಡವರು, ವಿದ್ಯಾಭ್ಯಾಸಕ್ಕೆ ಅನುಕೂಲತೆಯೇ ಇಲ್ಲದವರು ಇತ್ಯಾದಿ ಮಕ್ಕಳನ್ನು ಆರಿಸಿಕೊಳ್ಳುತ್ತಾರೆ.
ಇಂತಹ ಮಕ್ಕಳು ಹತ್ತಿರದ ಶಾಲೆಗಳಲ್ಲಿ ಸೇರಿಕೊಂಡು ಆಶ್ರಮದಲ್ಲಿ ಆಶ್ರಯ ಪಡೆಯುತ್ತಾರೆ. ಒಂದನೇ ತರಗತಿಯಿಂದ ೧೦ನೇ ತರಗತಿವರೆಗಿನ ಗಂಡುಮಕ್ಕಳು, ಒಂದರಿಂದ ೧೨ನೇ ತರಗತಿವರೆಗಿನ ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳಲಾಗುತ್ತದೆ. ಮುಂದೆ ಆಶ್ರಮದಲ್ಲಿ ಮಕ್ಕಳ ಸಾಮೂಹಿಕ ಜೀವನ ಆರಂಭಗೊಳ್ಳುತ್ತದೆ. ವಿವಿಧ ಸಂಸ್ಕಾರದ, ಬೇರೆ ಬೇರೆ ಊರಿನ, ಬೇರೆ ಬೇರೆ ಶಾಲೆಗಳಿಂದ, ಮನೆಗಳಿಂದ ಬಂದ ಮಕ್ಕಳು ಇಲ್ಲಿ ಒಂದೇ ಸೂರಿನಡಿಯಲ್ಲಿ ಒಂದೇ ಕುಟುಂಬವಾಗಿ ವಾಸಿಸುತ್ತಾರೆ. ಅವರ ಮೇಲ್ವಿಚಾರಣೆ ನೋಡಲು ಸಾಕಷ್ಟು ಗೃಹಮಾತೆಯರು, ಶಿಕ್ಷಕಿಯರು ಇರುತ್ತಾರೆ. ಅಡಿಗೆ ಮಾಡಲು ತಕ್ಕ ವ್ಯವಸ್ಥೆ ಇರುತ್ತದೆ. ಶೌಚದ ವ್ಯವಸ್ಥೆಯೂ ಚೆನ್ನಾಗಿಯೇ ಇದೆ.
ಮಕ್ಕಳನ್ನು ಕೆಲವು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಆ ಗುಂಪಿನಲ್ಲಿ ಚಿಕ್ಕ ಮಕ್ಕಳೂ ಮೇಲಿನ ತರಗತಿಯ ಮಕ್ಕಳೂ ಇರುತ್ತಾರೆ. ಆಯಾ ಗುಂಪಿನಲ್ಲಿಯೇ ಚಿಕ್ಕ ಮಕ್ಕಳ ಯೋಗಕ್ಷೇಮವನ್ನು ಹಿರಿಯ ಮಕ್ಕಳು ನೋಡಿಕೊಳ್ಳುತ್ತಾರೆ. ತಮ್ಮ ತಮ್ಮ ಗುಂಪಿನ ಮಕ್ಕಳ ಊಟ, ಸ್ನಾನ, ಶುಚಿತ್ವವನ್ನು ದೊಡ್ಡ ಮಕ್ಕಳು ಗಮನಿಸುತ್ತಾರೆ. ಪರಸ್ಪರ ಸಹಕರಿಸುತ್ತಾರೆ. ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಾರೆ. ಇಲ್ಲಿ ಜಾತಿ ಭೇದವಿಲ್ಲ. ಶ್ರೀಮಂತ, ಬಡವ ಎಂಬ ಆಲೋಚನೆಯೂ ಇಲ್ಲ. ಎಲ್ಲರೂ ನಮ್ಮವರು ಎಂಬ ಪ್ರೀತಿ, ಸ್ನೇಹ ಇದೆ. ಇವರೆಲ್ಲಾ ಚೆನ್ನಾಗಿ ನಡೆದುಕೊಳ್ಳುವಂತೆ ಗೃಹಮಾತೆಯರು ನೋಡಿಕೊಳ್ಳುತ್ತಾರೆ.
ಸೂರ್ಯೋದಯ ಕಾಲದಲ್ಲಿ ದೊಡ್ಡ ಮಕ್ಕಳನ್ನು ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ೫ ಗಂಟೆಗೆ ಎಚ್ಚರಿಸಲಾಗುತ್ತದೆ. ಚಿಕ್ಕ ಮಕ್ಕಳಿಗೆ ಇನ್ನೂ ಸ್ವಲ್ಪ ಹೊತ್ತು ಮಲಗಿರಲು ಅವಕಾಶ ಕೊಡಲಾಗುತ್ತದೆ. ಎದ್ದ ಮೇಲೆ ಮಕ್ಕಳು ತಮ್ಮ ತಮ್ಮ ವೈಯಕ್ತಿಕ ನೈರ್ಮಲ್ಯದ ಕೆಲಸದಲ್ಲಿ ತೊಡಗುತ್ತಾರೆ. ಇದರಲ್ಲೂ ಗೃಹಮಾತೆಯರು ಮತ್ತು ಶಿಕ್ಷಕಿಯರ ಸಂಪೂರ್ಣ ಗಮನ ಇರುತ್ತದೆ. ಇದರೊಂದಿಗೆ ಮಕ್ಕಳು ಶಾಲೆಗೆ ಹೋಗುವಾಗ ಬೇಕಾದ ತಯಾರಿಯನ್ನೂ ನಡೆಸುತ್ತಾರೆ. ಎಂಟು ಗಂಟೆಗೆ ಸರಿಯಾಗಿ ಊಟದ ಗಂಟೆ ಬಾರಿಸಲಾಗುತ್ತದೆ. ಮಕ್ಕಳು ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದ ತಮ್ಮ ತಮ್ಮ ತಟ್ಟೆಗಳೊಂದಿಗೆ ಸಿದ್ಧರಾಗಿ ಊಟದ ಕೋಣೆಯಲ್ಲಿ ಸೇರುತ್ತಾರೆ. ಪ್ರಾರ್ಥನೆಯೊಂದಿಗೆ ಬೆಳಗ್ಗಿನ ಉಪಾಹಾರ ಸ್ವೀಕರಿಸುತ್ತಾರೆ. ಉಪಾಹಾರದ ಬಳಿಕ ಮಕ್ಕಳು ಶಾಲೆಗೆ ಹೊರಡುತ್ತಾರೆ. ಶಿಕ್ಷಕಿಯರ ಸೂಚನೆಯಂತೆ ಸಾಲಾಗಿ ಅವರವರ ಶಾಲೆಗೆ ಹೊರಡುತ್ತಾರೆ. ಶಾಲೆಗಳಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ. ಶಾಲೆ ಬಿಟ್ಟ ಮೇಲೆ ಅದೇ ರೀತಿ ಆಶ್ರಮಕ್ಕೆ ಆಗಮಿಸಿ ಶುಚಿತ್ವದ ಕಾರ್ಯದಲ್ಲಿ ತೊಡಗುತ್ತಾರೆ. ೫ ೧/೨ ಗಂಟೆಗೆ ಸಂಜೆಯ ಫಲಾಹಾರ, ತಿಂಡಿ ಮತ್ತು ಹಾಲು ಹಂಚಲಾಗುತ್ತದೆ. ಫಲಾಹಾರದ ಬಳಿಕ ಸಾಮೂಹಿಕ ಭಜನೆಯ ಕಾರ್ಯಕ್ರಮವಿದೆ. ಭಕ್ತಿಭಾವದಿಂದ ಕೂಡಿದ ಹಾಡುಗಳನ್ನು ಮಕ್ಕಳು ಒಂದೇ ಸ್ವರದಲ್ಲಿ ಇಂಪಾಗಿ ಹಾಡುತ್ತಾರೆ. ಭಜನೆಯಿಂದ ಶಾಂತವಾದ ಮನಸ್ಸಿನೊಂದಿಗೆ ತಮ್ಮ ತಮ್ಮ ಅಧ್ಯಯನದಲ್ಲಿ ತೊಡಗುತ್ತಾರೆ. ಶಿಕ್ಷಕಿಯರು ಮಾರ್ಗದರ್ಶನ ಮಾಡುತ್ತಾರೆ. ಸಹಕರಿಸುತ್ತಾರೆ. ರಾತ್ರಿಯಾಗುತ್ತದೆ. ೭.೩೦ ಗಂಟೆಗೆ ಊಟದ ಗಂಟೆ ಎಚ್ಚರಿಸುತ್ತದೆ. ಮತ್ತೆ ಅದೇ ಶಿಸ್ತಿನೊಂದಿಗೆ ಊಟದ ಕೋಣೆ ಸೇರುತ್ತಾರೆ. ಮಕ್ಕಳ ವಯಸ್ಸು, ಆರೋಗ್ಯ ಇತ್ಯಾದಿಯ ಗಮನವಿರಿಸಿಕೊಂಡು ಆಹಾರ ನೀಡಲಾಗುತ್ತದೆ. ಇಲ್ಲಿ ಊಟದ ವ್ಯವಸ್ಥೆ ಸಂಪೂರ್ಣ ಸಸ್ಯಹಾರಿಯಾಗಿದೆ. ಊಟದ ಬಳಿಕ ಮಕ್ಕಳು ಶಾಲಾ ಕೆಲಸ, ಅಧ್ಯಯನದಲ್ಲಿ ತೊಡಗುತ್ತಾರೆ. ಬಿಡುವಿನ ವೇಳೆಯಲ್ಲಿ ಮಕ್ಕಳು ತಮಗೆ ಇಷ್ಟವಾದ ಪುಸ್ತಕಗಳನ್ನು ಓದುತ್ತಾರೆ. ಆಶ್ರಮದಲ್ಲಿ ವಿಶಾಲವಾದ ವಿವೇಕಾನಂದ ಪುಸ್ತಕ ಭಂಡಾರವಿದೆ. ಒಳ್ಳೊಳ್ಳೆಯ ಪುಸ್ತಕಗಳಿವೆ. ದಾನಿಗಳು ವಿವಿಧ ಪುಸ್ತಕಗಳನ್ನು ನೀಡುತ್ತಾರೆ. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳೂ ಬರುತ್ತವೆ. ಮಕ್ಕಳು ಬಿಡುಸಮಯದಲ್ಲಿ ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ.
ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಮಕ್ಕಳನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುತ್ತದೆ. ಸಣ್ಣಪುಟ್ಟ ಕಾಯಿಲೆಗಳಾದಾಗ ಆಶ್ರಮದಲ್ಲೇ ಚಿಕಿತ್ಸೆ, ಔಷಧ ಇದೆ. ಕೆಲವೇ ದಿನಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಶಿಸ್ತಿನ ಜೀವನಕ್ಕೆ ಒಗ್ಗಿಕೊಳ್ಳುತ್ತಾರೆ. ಮನೆಯವರು, ಹೆತ್ತವರು ಅಥವಾ ಪೋಷಕರು ತಿಂಗಳಿಗೊಮ್ಮೆ ಬಂದು ಮಕ್ಕಳನ್ನು ನೋಡಿ, ಮಾತನಾಡಿಸಿ ಹೋಗಲು ಅವಕಾಶವಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅಧ್ಯಕ್ಷ, ಕಾರ್ಯದರ್ಶಿಗಳ ಅನುಮತಿಯಿಂದ ಕರೆದುಕೊಂಡು ಹೋಗಿ ಮತ್ತೆ ತಂದುಬಿಡುವ ಅವಕಾಶವೂ ಇದೆ. ಸೇವಾ ಮನೋಭಾವದ ಆಡಳಿತ ಮಂಡಳಿಯ ಅಧ್ಯಕ್ಷರೂ, ಕಾರ್ಯದರ್ಶಿಗಳೂ ಪ್ರತಿದಿನ ಆಗಮಿಸಿ ಪರಿಶೀಲಿಸುತ್ತಾರೆ. ಸೇವಾ ಭಾವನೆಯಿಂದ ಸೇರಿಕೊಂಡ ಆಡಳಿತ ಮಂಡಳಿಯ ಸದಸ್ಯರು ಆಗಾಗ ಬಂದು ಮಕ್ಕಳನ್ನು, ಶಿಕ್ಷಕಿಯರನ್ನೂ, ಅಡಿಗೆಯವರನ್ನೂ ಕಂಡು ಸೂಕ್ತ ಸಲಹೆಗಳನ್ನೀಯುತ್ತಾರೆ. ಮಕ್ಕಳನ್ನು ಕಂಡು ಅವರ ಪಾಠಪ್ರವಚನಗಳಲ್ಲೂ ಸಹಕರಿಸುತ್ತಾರೆ.
ಶಿಕ್ಷಕಿಯರು ಮಕ್ಕಳ ಪ್ರತಿಭೆಗಳನ್ನು ಗುರುತು ಹಿಡಿದು ಅದರಲ್ಲಿ ಹೆಚ್ಚಿನ ತರಬೇತಿ ಕೊಡುತ್ತಾರೆ. ಮಕ್ಕಳಿಗೆ ಆಶ್ರಮದಲ್ಲಿ ನೃತ್ಯ, ಸಂಗೀತ, ಯೋಗಾಸನ, ಭಾಷಣ ಮುಂತಾದ ಕಲೆಗಳಲ್ಲಿ ತರಬೇತಿ ಕೊಡಲಾಗುತ್ತದೆ. ವಿಶೇಷ ದಿನಗಳಲ್ಲಿ ಮಕ್ಕಳು ಭಯಬಿಟ್ಟು ಭಾಷಣ ಮಾಡುತ್ತಾರೆ. ರಾಷ್ಟ್ರೀಯ ಹಬ್ಬಗಳು, ಧಾರ್ಮಿಕ ಹಬ್ಬಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದು ಬರುತ್ತಾರೆ. ಆಟೋಟ ಸ್ಪರ್ಧೆಗಳಲ್ಲೂ ಗೆಲುವು ಗಳಿಸಿ, ಬಹುಮಾನ ಗಳಿಸಿ ಆಶ್ರಮಕ್ಕೆ ಒಳ್ಳೆಯ ಹೆಸರು ತರುತ್ತಾರೆ.
ಮುಖ್ಯವಾಗಿ ಇಲ್ಲಿನ ಮಕ್ಕಳು ವಿನಯವನ್ನು ಕಲಿಯುತ್ತಾರೆ. ಮನೆಯಲ್ಲಿ ಇಲ್ಲದ ಶಿಸ್ತಿನ ಜೀವನ ಎಳವೆಯಲ್ಲೇ ಇವರಿಗೆ ಸಿಗುತ್ತದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಮಾತಿನಂತೆ ಇವರು ಒಗ್ಗಟ್ಟಿನಿಂದ ಬದುಕುವುದು, ಗುರುಹಿರಿಯರನ್ನು ಗೌರವಿಸುವುದು, ಪರಸ್ಪರ ಸ್ನೇಹದಿಂದ ಜೀವಿಸುವುದು ಮುಂತಾದ ಸಂಸ್ಕಾರಗಳು ಇವರಿಗಾಗುತ್ತದೆ. ಅನಾಥಾಶ್ರಮದವರು ಎಂದು ಮೂಗುಮುರಿಯುವ, ಕಡೆಗಣಿಸುವ ಅವಕಾಶವೇ ಇಲ್ಲ. ಮನೆಗಳಲ್ಲಿ ಹೆತ್ತವರೊಂದಿಗೆ ಸುಖವಾಗಿ ಬದುಕುವ ಮಕ್ಕಳು ಕೂಡಾ ಇದರಿಂದ ಕಲಿತುಕೊಳ್ಳಬೇಕಾದುದು ಬಹಳವಿದೆ. ವರ್ಷದಲ್ಲಿ ಒಂದೆರಡು ಬಾರಿ ಪ್ರವಾಸದ ಕಾರ್ಯಕ್ರಮವಿದೆ. ಇದರಲ್ಲಿ ಮಕ್ಕಳು ಉಲ್ಲಾಸದಿಂದ ಭಾಗವಹಿಸಿ ಸಂತೋಷಪಡುತ್ತಾರೆ. ಅನಾಥರು, ಆಶ್ರಮವಾಸಿಗಳೆಂದು ಕೀಳರಿಮೆಗೆ ಒಳಗಾಗದೆ ನೂರಾರು ಮಂದಿಯೊಂದಿಗೆ ಒಂದಾಗಿ ಬದುಕುವ ಇವರು ನಿಜವಾಗಿ ಅನಾಥರಲ್ಲ. ಅನಾಥೋ ದೈವ ರಕ್ಷಕ. ಅದೃಷ್ಟದಿಂದ ಈ ಬದುಕು ಪಡಕೊಂಡ ಮಕ್ಕಳು ಅನಾಥರಲ್ಲ, ಭಾಗ್ಯವಂತರು.